ಫಿಲಿಸಿನೀ
ಟೆರಿಡೊಫೈಟ ವಿಭಾಗಕ್ಕೆ ಸೇರಿದ ಪ್ರಮುಖ ವರ್ಗ. ಟೀರೊಫೈಟ ಅಥವಾ ಟೀರಾಪ್ಸಿಡ ಎಂಬ ಹೆಸರುಗಳೂ ಇದಕ್ಕೆ ಇವೆ. ಜರೀಸಸ್ಯಗಳನ್ನು (ಫನ್ರ್ಸ್) ಇದು ಒಳಗೊಳ್ಳುತ್ತದೆ. ಇವು ಪುಷ್ಪಹೀನ ಹಾಗೂ ಬೀಜರಹಿತ ಸಸ್ಯಗಳು. ಇವು ಹೆಚ್ಚಾಗಿ ಭೂವಾಸಿಗಳು. ಇವುಗಳಲ್ಲೂ ಮೇಲ್ವರ್ಗದ ಸಸ್ಯಗಳಲ್ಲಿರುವಂತ ಬೇರು, ಕಾಂಡ, ಎಲೆ ಇತ್ಯಾದಿಗಳುಂಟು. ಮೇಲಾಗಿ ಬೇರು, ಕಾಂಡಗಳಲ್ಲಿ ಕೋಶಸಮೂಹಗಳ ವಿತರಣೆಯೂ ಉಂಟು. ಉಚ್ಚವರ್ಗದ ಪುಷ್ಪೀಯ ಸಸ್ಯಗಳಲ್ಲಿರುವಂತೆ ಇವುಗಳಲ್ಲೂ ಕ್ಸೈಲಮ್ (ನೀರ್ನಾಳ) ಮತ್ತು ಫ್ಲೋಯೆಮ್ (ಆಹಾರ ನಾಳ) ಎಂಬ ವಿಶಿಷ್ಟ ಕೋಶ ಸಮೂಹಗಳಿವೆ. ಆದರೆ ಇವುಗಳ ರಚನೆ ಅತ್ಯಂತ ಸರಳ ಬಗೆಯದು. ಆದ್ದರಿಂದಲೇ ಇವಕ್ಕೆ ನಾಳಮಯ ಪುಷ್ಪರಹಿತ ಸಸ್ಯಗಳು ಎಂದು ಕರೆಯುವುದೂ ಉಂಟು.

	ಇತರ ಕೆಲವು ಪುಷ್ಪರಹಿತ ಸಸ್ಯಗಳಲ್ಲಿ ಕಂಡುಬರುವುದಕ್ಕೆ ವ್ಯತಿರಿಕ್ತವಾಗಿ ಈ ಗುಂಪಿನ ಸಸ್ಯಗಳಲ್ಲಿ ಪ್ರಧಾನ ಸಸ್ಯವೇ ಬೀಜಾಣುಜನಕ (ಸ್ಪೋರೊಫೈಟ್). ಕಾಲ ಕ್ರಮದಲ್ಲಿ ಈ ಸಸ್ಯ ವಿಶಿಷ್ಟ ಬೀಜಾಣುಕೋಶಗಳಲ್ಲಿ ಬೀಜಾಣುಗಳನ್ನು ಉತ್ಪಾದಿಸುತ್ತದೆ. ಬೀಜಾಣುಗಳು ಮುಂದೆ ಮೊಳೆತು ಪ್ರೋತ್ಯಾಲಸ್ ಎಂಬ ರಚನೆಗಳಾಗಿ ಮಾರ್ಪಾಟು ಹೊದುತ್ತವೆ. ಇದು ಲಿಂಗಾಣುಸಂತತಿ (ಗ್ಯಾಮಿಟೊಫೈಟ್). ಈ ವಿಶಿಷ್ಟ ರಚನೆಯ ಮೇಲೆ ಮುಂದೆ ಆಂತೆರಿಡಿಯ ಮತ್ತು ಆರ್ಕಿಗೋನಿಯ ಎಂಬ ಗಂಡು ಹಾಗೂ ಹೆಣ್ಣು ಜನನಾಂಗಗಳು ಉದ್ಭವಿಸುತ್ತವೆ. ಆಂತರಿಡಿಯಮ್ ಪುಂಜನನಕೋಶ ಸೂಕ್ಷ್ಮ ಚಲನಾಂಗಗಳುಳ್ಳ ಅನೇಕ ಪುರುಷಾಣುಗಳನ್ನು ಉತ್ಪಾದಿಸುತ್ತದೆ. ಪುರುಷಾಣುಗಳು ಗರ್ಭಾಂಕುರ ಕ್ರಿಯೆ ನಡೆಸಬೇಕಾದಾಗ ನೀರಿನ ಅವಶ್ಯಕತೆ ಉಂಟು. ಹೀಗಾಗಿ ಈ ಗುಂಪಿನ ಸಸ್ಯಗಳು ಜಲಸನ್ನಿವೇಶವನ್ನು ಬಟ್ಟು ಭೂಮಿಯ ಮೇಲೆ ಬಂದು ನೆಲಸುವಲ್ಲಿ ಸಾಕಷ್ಟು ಯಶಸ್ವಿಯಾಗಿರುವುದೇನೊ ನಿಜ. ಆದರೆ ಇವುಗಳ ಜೀವನ ಚಕ್ರದಲ್ಲಿ ಲಿಂಗಾಣುಗಳ ಸಂಯೋಗ ಕಾಲಕ್ಕಾದರೂ ಇವಕ್ಕೆ ಅಲ್ಪಸ್ವಲ್ಪ ನೀರಿನ ಆವಶ್ಯಕತೆ ಇದ್ದೇ ಇದೆ ಎಂಬುದು ಗಮನಾರ್ಹ.

	ಈ ಬಗೆಯ ಗರ್ಭಾಂಕುರತೆಯ ಅನಂತರ ಅಂಡಾಣು ಯುಗ್ಮಜವಾಗಿ ಪರಿವರ್ತನೆಗೊಳ್ಳುತ್ತದೆ. ಇದು ಮುಂದೆ ಬೆಳೆವಣಿಗೆ ಹೊಂದಿ ಒಂದು ಭ್ರೂಣಸಸ್ಯವಾಗಿ ಪರಿಣಮೆಸಿ ಬೀಜಾಣು ಜನಕವಾಗಿ ವರ್ತಿಸುತ್ತದೆ. ಹೀಗಾಗಿ ಈ ಗುಂಪಿನ ಸಸ್ಯಗಳ ಜೀವನ ಕ್ರಮದಲ್ಲಿ ಬೀಜಾಣು ಜನಕ__ಲಿಂಗಾಣುಜನಕ ಎಂಬ ಸಂತತಿ ಪರ್ಯಾಯಕ್ರಮ ಕಂಡುಬರುತ್ತದೆ.

	ಫಿಲಿಸಿನೀ ವರ್ಗ ಟೆರಿಡೊಫೈಟ್ ಗುಂಪಿನ ಅತ್ಯಂತ ಉನ್ನತ ಶ್ರೇಣಿಯ ಗುಂಪು. ಇದರಲ್ಲಿ ಯೂಸ್ಪೊರ್ಯಾಂಜಿಯೇಟೀ ಮತ್ತು ಲೆಪ್ಟೊಸ್ಟೊರಾಂಜಿಯೇಟೀ ಎಂಬ ಎರಡು ಮುಖ್ಯ ಕವಲುಗಳುಂಟು. ಇವುಗಳಲ್ಲಿ ಮೊದಲನೆಯದು ಎರಡನೆಯದಕ್ಕಿಂತ ಹೆಚ್ಚು ಹಿಂದುಳಿದಿರುವಂಥದು ಹಾಗೂ ಪ್ರಾಚೀನವಾದ್ದು.

	ಯೂಸ್ಪೊರ್ಯಾಂಜಿಯೇಟ್ ಗುಂಪಿನ ಫನ್ರ್ಸ್ ಸಸ್ಯಗಳಲ್ಲಿ ಬಾಹ್ಯಕೋಶಗಳ ಸಮೂಹವೊಂದು ಹೊರ ಮತ್ತು ಒಳ ಸಾಲಿನ ಕೋಶಗಳನ್ನು ಉತ್ಪಾದಿಸುತ್ತದೆ. ಇವುಗಳ ಪೈಕಿ ಹೊರಸಾಲಿನವು ಬೀಜಾಣುಕೋಶ ಭಿತ್ತಿಯನ್ನೂ, ಒಳಸಾಲು ಬೀಜಾಣುಕೋಶಗಳನ್ನೂ ಉತ್ಪಾದಿಸುತ್ತವೆ. ಆದರೆ ಲೆಪ್ಟೊಸ್ಪೊರಾಂಜಿಯೇಟಿ ಗುಂಪಿನ ಫನ್ರ್ಸ್ ಸಸ್ಯಗಳಲ್ಲಿ ಇಡೀ ಬೀಜಾಣುಕೋಶವೇ ಬೀಜಾಣುಪತ್ರದ ಒಂದು ಹೊರಕೋಶದಿಂದ ಉದ್ಭವವಾಗುತ್ತದೆ.	
(ಪಿ.ಎಸ್.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ